ಮಾಯಾ ಜಿಂಕೆಯ ಬೆನ್ನೇರಿ..

ಮೂಡ್ಲುಮನೆ ಭಾಸ್ಕರ ಪಂಚಮುಖಿಯ ದೇವೀರಮ್ಮನ ದಿನಸಿ ಅಂಗಡಿಯೆದುರು ಕುಳಿತು, ಅಲ್ಲೇ ಮೇಲುಗಡೆ ಇದ್ದ ಕುಮಾರಣ್ಣನ ಹೋಟೇಲಿನ ಅಡುಗೆಮನೆಯ ಹಿಂದಿಂದ ಹೊರಟಿದ್ದ ಹೊಗೆಯನ್ನೇ ನೋಡುತ್ತಿದ್ದ. ಆ ಧೂಮ ರಾಶಿ, ಮೆಲ್ಲನೆ ಮೇಲೆ ಸಾಗುತ್ತಾ ಆಕಾಶದಲ್ಲಿ ಬೆರೆಯುತ್ತಿತ್ತು. ಭಾಸ್ಕರನಿಗೆ ಯಾಕೋ ಇವತ್ತು ಮಸಾಲೆ ದೋಸೆಯನ್ನೇ ತಿನ್ನಬೇಕು ಅಂತ ಅನ್ನಿಸಿಬಿಟ್ಟಿತ್ತು. ಆ ಕುಂದಾಪ್ರದ ಭಟ್ರು ಮಸಾಲೆ ದೋಸೆ ಮಾಡುವ ಚಂದ ನೆನೆಸಿಕೊಂಡೇ ಬಾಯಲ್ಲಿ ನೀರೂರುತ್ತಿತ್ತು ಅವನಿಗೆ. ಕಿಸೆಯಲ್ಲಿದ್ದ ದುಡ್ಡನ್ನೊಮ್ಮೆ ತೆಗೆದು ಎಣಿಸಿದ. ೨ ರೂಪಾಯಿಯ ೨ ಕಾಯಿನುಗಳು, ಐವತ್ತು ಪೈಸೆಯದು ಮೂರು. ಥತ್, ಬೆಳಗಿಂದ ಇದು ನಾಲ್ಕನೇ ಸಲ ಲೆಕ್ಕ ಹಾಕಿದ್ದು ಎಂದುಕೊಳ್ಳುತ್ತಾ ಅದನ್ನ ಮತ್ತೆ ಜೇಬಿಗಿಳಿಸಿದ.

ಪಂಚಮುಖಿ, ಕೊಲ್ಲೂರು ಶಿವಮೊಗ್ಗದ ದಾರಿಯ ಮಧ್ಯ ಬರುವ ಪುಟ್ಟ ಊರು, ಹಳ್ಳಿ.. ಏನು ಬೇಕಾದರೂ ಕರೆಯಿರಿ. ಒಂದಿಷ್ಟು ಜನ ವಸತಿ ಅಂಗಡಿ ಅದೂ ಇದೂ ಇರೋ ಜಾಗ. ಮಲೆನಾಡಿನ ಎಲ್ಲ ಗುಣ ಲಕ್ಷಣಗಳಿರುವ ಚಟುವಟಿಕೆಯಿಂದ ಕೂಡಿರುವ ಸ್ಥಳ. ಶಿವಮೊಗ್ಗದ ಕಡೆ ಹೋಗುವ ಎಲ್ಲಾ ಬಸ್ಸುಗಳೂ ಇಲ್ಲಿ ನಿಂತೇ ಮುಂದುವರಿಯಬೇಕು, ಒಂದೆರಡನ್ನು ಬಿಟ್ಟು, ಅಂತೆಯೇ ಕೊಲ್ಲೂರಿಗೆ ಹೋಗುವ ಬಸ್ಸುಗಳೂ. ಶರಾವತಿ ಹಿನ್ನೀರಿನ ಹರಹಿಗೆ, ಇಲ್ಲಿಂದ ಬರೀ ಎರಡು ಕಿಲೋಮೀಟರು. ಅಬ್ಬಬ್ಬಾ ಅಂದ್ರೆ ೧ ಸಾವಿರ, ಊಹೂಂ ಅಷ್ಟೂ ಇರಲಿಕ್ಕಿಲ್ಲ ..ಜನಸಂಖ್ಯೆ. ಅತ್ತಿತ್ತಲ ಹಳ್ಳಿಗಳಿಂದ ಬಂದು ಹೋಗುವವರೇ ಜಾಸ್ತಿ. ಮನೆ ಖರ್ಚಿಗೆ ಏನೇ ಸಾಮಾನು ಬೇಕಾದರೂ ಪಂಚಮುಖಿಗೇ ಬರಬೇಕು , ಇಲ್ಲಾ ಶಿವಮೊಗ್ಗಕ್ಕೋ , ಹೊಸನಗರಕ್ಕೋ ಹೋಗಬೇಕು.

ಶರಾವತಿಯ ಹಿನ್ನೀರು ಪಂಚಮುಖಿಯ ಆಸು ಪಾಸೆಲ್ಲವನ್ನ ಬಳಸಿಕೊಂಡಿದೆ. ಹಿನ್ನೀರಿನ ಆ ಕಡೆ ಸಣ್ಣ ಸಣ್ಣ ಹಳ್ಳಿಗಳು ಬೇಕಷ್ಟಿವೆ. ಅವರಲ್ಲಿ ಹೆಚ್ಚಿನ ಹುಡುಗರು ಹೊಟ್ಟೆಪಾಡಿಗಾಗಿ ಪಂಚಮುಖಿಗೇ ಬರಬೇಕು.ಅಡಿಕೆ ತೋಟ ಇರುವ ಮಧ್ಯಮ ವರ್ಗದವರಿಗಾದರೆ ಪರವಾಗಿಲ್ಲ. ಅದಕ್ಕೂ ಕೆಳಗಿನವರಿಗೆ ಕೂಲಿ ನಾಲಿಯೇ ಗತಿ. ಹೆಂಗಸರು ಗಂಡಸರು ಹೆಗಡೇರ ಮನೆಗೆ ಹೋದಾರು, ಆದರೆ ಯುವಕರಿಗೆ ಅದಾಗದು! ಮರ್ಯಾದೆ ಪ್ರಶ್ನೆ.. ಸಿಕ್ಕಷ್ಟು ಸಿಗಲಿ ಅಂತ ಪಂಚಮುಖಿಗೆ ಬಂದು ನೊಣ ಹೊಡೆಯುತ್ತಾ ಕೂತಿರುತ್ತಾರೆ. ಹೆಚ್ಚೆಂದರೆ ಬಸ್ಸಿಂದ ಲೋಡು ಇಳಿಸುವ ಕೆಲಸ, ಇನ್ನು ಯಾರಾದರೂ ಮನೆ ಕಟ್ಟಿಸುತ್ತಿದ್ದರೆ ಅವರಿಗೆ ಸಿಮೆಂಟು, ಕಲ್ಲು ಇತ್ಯಾದಿ ಶಿವಮೊಗ್ಗದಿಂದ ತರುವ ಕಾರ್ಯ..

ಭಾಸ್ಕರನೂ ಬೆಳಗಿಂದ ಬಂದು ಕೂತಿದ್ದು ಅದೇ ಉದ್ದೇಶಕ್ಕಾಗಿ. ನಿನ್ನೆ ಅವನಿಗೆ ಗಣಪತಿ ಭಟ್ಟರ ಭತ್ತದ ಚೀಲ ಮಿಲ್ಲಿಗೆ ಕೊಟ್ಟು ಬರುವ ಕೆಲಸ ಸಿಕ್ಕಿತ್ತು, ಇವತ್ತೂ ಅಂತದ್ದೇನಾದರೂ ಕೆಲಸ ಯಾರಾದರೂ ಕೊಡುತ್ತಾರಾ ಅಂತ ಕಾಯುತ್ತ ಕುಳಿತಿದ್ದ . ಆದರೆ ಕಾಯಿ ಹಣ್ಣಾಗುವ ಲಕ್ಷಣ ಇನ್ನೂ ಕಂಡು ಬರುತ್ತಿಲ್ಲ. ಅವನ ಜೊತೆಗೆ ನೊಣ ಹೊಡೆಯುವ ಓಟೇಹಳ್ಳಿ ಸುರೇಶ, ವೀರಭದ್ರ, ಯಾರೂ ಇನ್ನೂ ಪಂಚಮುಖಿಯತ್ತ ಮುಖ ಹಾಕಿರಲಿಲ್ಲ. ಬಾಡಿಗೆ ಬೈಕಿನ ನಾಗರಾಜ ಮಾತ್ರ , "ಎಂತೋ ಭಾಸ್ಕರ" ಅಂತಂದು ಸುಮ್ಮನಿದ್ದ.

ಶಿವಮೊಗ್ಗ ಬಸ್ಸು ಬರುವ ಸಮಯವಾಗಿತ್ತು. ಯಾರಾದರೂ ಅದರಲ್ಲಿ ಬಂದು, ಗಿರಾಕಿ ಸಿಕ್ಕಿ, ಮಸಾಲೆ ದೋಸೆಗೆ ದುಡ್ಡಾಗಬಹುದೇನೋ ಅನ್ನುವುದು ಭಾಸ್ಕರ ಆಸೆ. ಅದಲ್ಲದೇ ಅವನ ಸ್ಪರ್ಧಿಗಳಾರೂ ಬಂದಿಲ್ಲ ಬೇರೆ!. ಮೆಲ್ಲನೆ ಕುಳಿತಲ್ಲಿಂದ ಎದ್ದು, ಬಸ್ ಸ್ಟ್ಯಾಂಡಿನ ಕಡೆಗೆ ಬಂದ. ಅಲ್ಲಿ ನಾಲ್ಕೆಂಟು ಜನ ಅದೇ ಬಸ್ಸಿಗೆ ಕಾಯುತ್ತಿದ್ದರು. ಇವನು ಬಸ್ ಸ್ಟ್ಯಾಂಡಿನ ಕಂಬದ ಬಣ್ಣ ಕೆರೆಯುವ ಕೆಲಸ ಶುರು ಮಾಡುವಾಗಲೇ ಶಾಲೆ ತಿರುವಲ್ಲಿ ಬಸ್ಸಿನ ಹಾರ್ನು ಕೇಳಿಸಿತು. ಅಲ್ಲಿಯ ತನಕ ಜಡವಾಗಿದ್ದ ಪೇಟೆಗೆ ಒಮ್ಮೆಲೇ ಕಳೇ ಬಂದು ಬಿಟ್ಟಿತು. ಪಾರ್ಸೆಲ್ ಗೆ ಕಾಯುತ್ತಿದ್ದ ಚಪ್ಪಲಿ ಅಂಗಡಿ ಹಿರಿಯಣ್ಣ, ಮಲ್ಲಿಗೆ ಹೂ ಕೊಡಲು ದೇವೀರಮ್ಮನ ಮಗಳು , ಯಾರದೋ ಅಂಗಡಿ ಕಟ್ಟೆಯಲ್ಲಿ ಕವಳ ಜಗಿಯುತ್ತಿದ್ದ ಪ್ರಯಾಣಿಕರು ಆ ಕಡೆಗೇ ಬರ ಹತ್ತಿದರು. ಕುಮಾರಣ್ಣ ನ ಹೋಟೇಲಿನ ಕ್ಯಾಶಿಯರ್ರು , ಗಲ್ಲಾ ಪೆಟ್ಟಿಗೆ ಯ ಧೂಳನ್ನ ಜಾಡಿಸಿ ವ್ಯಾಪಾರಕ್ಕೆ ಸಿದ್ಧನಾಗಿ ಕುಳಿತ.

ತನ್ನ ಸಮಸ್ತ ದೇಹವನ್ನು ಗಜಬಜ ಅಲ್ಲಾಡಿಸುತ್ತಾ ಶಿವಮೊಗ್ಗ ಬಸ್ಸು ಬಂದು ನಿಂತಿತು. ನಿನ್ನೆ ಸಾಗರದ ಮಗಳ ಮನೆಗೆ ಹೋಗಿದ್ದ ಸುಬ್ಬಣ್ಣ ಭಟ್ರು ಮೆಲ್ಲನೆ ಮೊದಲಿಗೆ ಇಳಿದರು. ಮತ್ತೆ ದೇವಸ್ಥಾನದ ಅರ್ಚಕರ ಹೆಂಡ್ತಿ ಸೀಮಕ್ಕ, ಆಮೇಲೆ ಸೇಂದಿ ಅಂಗಡಿ ದಾಸ... ಥತ್, ಭಾಸ್ಕರ ಅಲ್ಲೇ ಕ್ಯಾಕರಿಸಿ ಉಗಿದ, ಅಸಮಾಧಾನದಲ್ಲಿ. ತನ್ನ ಹಣೇಬರದಲ್ಲಿ ಇವತ್ತು ಯಾವನೂ ಈ ಬಸ್ಸಲ್ಲಿ ದುಡ್ಡು ಸಿಗೋ ಗಿರಾಕಿ ಇಲ್ಲ ಅಂತ ಆಯ್ತು ಅಂತ ಅಂದುಕೊಳ್ಳುತ್ತಿರುವಷ್ಟರಲ್ಲೇ, 'ಧಪ್" ಅಂತ ಒಂದು ಸೂಟ್ ಕೇಸ್ ಹೊರಗೆ ಬಿತ್ತು, ಅಲಾ! ಹಿಂದೆಯೇ ಮತ್ತೊಂದು ದೊಡ್ದ ಬ್ಯಾಗು. ಯಾರಪ್ಪ ಇದು ಅಂತ ಕುತೂಹಲದಿಂದ ನೋಡಿದರೆ, ರಹೀಮ! ಟೈಲರ್ ಅಹಮದ್ ಬ್ಯಾರಿಯ ಮಗ ರಹೀಮ. ಭಾಸ್ಕರನಿಗೆ ತನ್ನ ಕಣ್ಣನ್ನೇ ನಂಬದಂತಾಯಿತು. ಈ ಪಂಚಮುಖಿ ಊರಿಂದ ಮೊತ್ತ ಮೊದಲ ಬಾರಿ ವಿದೇಶಕ್ಕೆ ಪ್ರಯಾಣಿಸಿದ್ದ ವ್ಯಕ್ತಿ ಅವನು.

ಎಂಟು ತಿಂಗಳ ಹಿಂದೆ ಇದೇ ರಹೀಮ, ಭಾಸ್ಕರನ ಹಾಗೇ ಪಂಚಮುಖಿಯಲ್ಲಿ ಖಾಲಿ ಕೂತಿದ್ದ. ಸೀತಾರಾಮ ಹೆಗಡೇರ ಮನೆಗೆ ಕೆಲಸಕ್ಕೆ ಹೋಗುತ್ತಿದ್ದವನು ಏನೋ ಗಲಾಟೆ ಮಾಡಿಕೊಂಡು " ಹೆಗ್ಡೇರೇ ಇನ್ ನಿಮ್ ಮನಿಗೆ ಕಾಲಿಡೂದಿಲ್ಲ" ಅಂತ ಶಪಥ ಮಾಡಿ ಬಂದಿದ್ದನಂತೆ. ಸೀತಾರಾಮ ಹೆಗಡೆ ಅಂದರೆ ಪಂಚಮುಖಿಗೆಲ್ಲ ಗಟ್ಟಿ ಮನುಷ್ಯ. ಎಕರೆಗಟ್ಟಲೆ ಅಡಿಕೆ ತೋಟ, ಭತ್ತದ ಗದ್ದೆ, ವೆನೀಲಾ ಅದೂ ಇದೂ ಬೆಳೆದವರು. ಮುಸ್ಲಿಮನೊಬ್ಬನನ್ನು ಅವರು ಕೆಲಸಕ್ಕಿಟ್ಟುಕೊಂಡಿದ್ದಾರೆ ಎಂಬುದೇ ಇತರ ಹಲವ ಹುಬ್ಬು ಮೇಲೇರಲು ಕಾರಣವಾದರೂ, ಅವರು ಅದಕ್ಕೆಲ್ಲ ಸೊಪ್ಪು ಹಾಕಿದವರಲ್ಲ. ತಮ್ಮ ಸ್ವಂತ ಮಗನಂತೆ ನೋಡಿಕೊಂಡಿದ್ದರು ರಹೀಮನನ್ನ. ಅವನೂ ಅದೇ ತರ ಮೆರೀತಿದ್ದ, ಯಾರನ್ನೂ ಲೆಕ್ಕಕ್ಕೆ ತಗೊಳ್ಳದೇ.

ಏನು ಗಲಾಟೆ ಆಯಿತೋ ಏನೋ , ಅವರಿಬ್ಬರ ಮಧ್ಯ. ರಹೀಮ ಪಂಚಮುಖಿಯ ಬೀದಿಗಳಲ್ಲಿ ಸುಮ್ಮನೇ ತಿರುಗುತ್ತಿದ್ದ ಸ್ವಲ್ಪ ದಿನ. ಅಮೇಲೆ ಒಂದು ದಿನ ಇಡೀ ಪಂಚಮುಖಿಗೇ ಬಾಂಬು ಹಾಕಿದ! "ನಾನು ಇನ್ನೊಂದು ತಿಂಗಳಲ್ಲಿ ದುಬೈಗೆ ಹೋಗುತ್ತೇನೆ"ಅಂತ. ಅದ್ಯಾವ ಕಾಲದಲ್ಲಿ ಪಾಸ್ಪೋರ್ಟು ಮಾಡಿದ್ದನೋ ಏನೋ!. "ಬೆಂಗ್ಳೂರಲ್ಲಿರುವ ನಮ್ಮ ಮಾವ ಹೆಲ್ಪು ಮಾಡ್ತಾರೆ ಭಾಸ್ಕರಾ, ಅಲ್ಲಿ ಕಂಪನೀಲಿ ಕೆಲ್ಸ, ಕೈ ತುಂಬ ಸಂಬ್ಳ, "ಈ ಹೆಗ್ದೇರ್ ಮನೆ ಸಗಣಿ ತೆಗಿಯೋ ಕಷ್ಟ ಯಾವಾನಿಗೆ ಬೇಕು, ಅಲ್ಲಿಯ ಒಂದು ರುಪಾಯಿಗೆ ನಮ್ಮಲ್ಲಿ ಇಪ್ಪತ್ತು ರುಪಾಯಿ ಗೊತ್ತಾ" ಅಂತೆಲ್ಲ ಹೇಳಿ ಇವರೆಲ್ಲರ ಕಣ್ಣುಗಳು ಅರಳುವಂತೆ ಮಾಡಿದ್ದ . ವಿದೇಶೀ ಹುಡುಗೀರು, ವಿಮಾನ ಪ್ರಯಾಣ ಹೀಗೆ ಇವರು ಯಾವತ್ತೂ ನೊಡಿರದ ಹೊಸ ಜಗತ್ತಿನ ಬಗ್ಗೆ ರೋಮಾಂಚನಗೊಳ್ಳುವಂತೆ ಕಥೆ ಹೇಳಿದ್ದ, ಒಂದು ಬೆಳಗ್ಗೆ ಹೊರಟೂ ನಿಂತಿದ್ದ ದುಬೈಗೆ.

ಆದ್ರೆ ಇನ್ನು ೨ ವರ್ಷ ಊರಿನ ಕಡೆಗೆ ತಲೆನೂ ಹಾಕಲ್ಲ ಅಂತ ಹೇಳುತ್ತಿದ್ದ ಪುಣ್ಯಾತ್ಮ ಇಷ್ಟು ಬೇಗ ಯಾಕೆ ಬಂದ ಅಂತ ಸಮಸ್ಯೆಯಾಯಿತು ಭಾಸ್ಕರನಿಗೆ. ಏನೇ ಇರಲಿ, ಅವನ್ನೇ ಕೇಳೋಣ ಅಂತ "ರಹೀಮ, ಏನೋ ಮತ್ತೆ ಹೇಗಿತ್ ದುಬಾಯ್" ಅಂತ ಸಲುಗೆಯಿಂದ ಹೆಗಲ ಮೇಲೆ ಕೈ ಹಾಕ ಹೊರಟ. ಥಟ್ ಅಂತ ನೆನಪಾಯಿತು, ಅವನೀಗ ಆಪೀಸರ್ರು ಅಂತ. ರಹೀಮ ' ಹಮ್ ಭಾಸ್ಕರಾ, ಚೆನ್ನಾಗಿ ಇದೆ, ಬಾ ಈ ಬ್ಯಾಗು ಹಿಡಿ ಮನೆಗೆ ಹೋಗೋಣ' ಅಂದವನೇ ಮನೆ ದಾರಿ ಹಿಡಿದು ಬಿಟ್ಟ. ಅಲ್ಲಿದ್ದ ಹೆಚ್ಚಿನವರೆಲ್ಲ ರಹೀಮನ್ನ ಪ್ರಶ್ನಾರ್ಥಕ ಚಿನ್ಹೆಯಿಂದಲೇ ನೋಡುತ್ತಿದ್ದರು. ಭಾಸ್ಕರನಿಗೂ ವಿಸ್ಮಯ! ಕುಮಾರಣ್ಣನ ಹೋಟೇಲಲ್ಲಿ ಚಾ ಗೀ ಕುಡ್ದು, ದುಬಾಯ್ ಕತೆ ಹೇಳ್ತಾನೆ ಅಂದುಕೊಂಡಿದ್ರೆ ಮನೆ ಕಡೆಗೆ ಹೊರಟು ಬಿಟ್ಟಿನಲ್ಲ ಇವನು.. ಹಮ್, ಏನಾದರಾಗಲಿ ಮನೆ ದಾರಿಯಲ್ಲಿ ತನಗಾದರೂ ಕಥೆ ಹೇಳುತ್ತಾನೆ, ಮತ್ತು ವಿದೇಶ ವೈಭವವನ್ನ ಕೇಳಿಸಿಕೊಳ್ಳುವ ಪಂಚಮುಖಿಯ ಪ್ರಥಮ ವ್ಯಕ್ತಿ ತಾನು ಅಂತ ಒಳಗೊಳಗೇ ಆನಂದವಾಯಿತು ಅವನಿಗೆ.

ಮುಸಲ್ಮಾನರ ಕೇರಿ ಊರಿಂದ ಸ್ವಲ್ಪ ಹೊರಗಿದೆ, ಅರ್ಧ -ಒಂದು ಕಿಲೋಮೀಟರೇ ಆದೀತೇನೋ. ಸ್ವಲ್ಪ ದೂರ ಮಾತೇ ಇಲ್ಲ ರಹೀಮನದು. ಆಮೇಲೆ ಶುರು ಮಾಡಿದ. "ಭಾಸ್ಕರಾ ದುಬಾಯಿ ಬ್ಯಾಡಾಗಿತ್ತು" ಅಂದ. ಇವನಿಗೆ ಅರ್ಥವಾಗಲಿಲ್ಲ . "ಹಾಂ? ಏನು ಹಾಂಗಂದ್ರೆ?.. " ಅಂದ ಬ್ಯಾಗನ್ನ ತಲೆ ಮೇಲೆ ಸರಿಯಾಗಿ ಇಟ್ಟುಕೊಳ್ಳುತ್ತಾ. ನಾನು ಅಲ್ಲಿ ಹೋಗಿ ಯಡ್ವಟ್ಟು ಮಾಡ್ಕಂಡೆ ಮಾರಾಯಾ, ಹೋಗಿದ್ದು ಯಾವುದೋ ಕಂಪನಿ ಕೆಲಸಕ್ಕೆ ಅಂತ . ಆದರೆ ನನ್ನ ಸೇರಿಸಿದ್ದು ಯಾವ್ದೋ ಸಿಮೆಂಟು ಮಾಡೋ ಫ್ಯಾಕ್ಟರಿಗೆ. ಅಲ್ಲಿ ಊಟ , ಮಲಗಕ್ಕೆ ರೂಮು ಅಷ್ಟೇ!. ಸಂಬಳನೇ ಕೊಡ್ಲಿಲ್ಲ , ವರ್ಷವಾದಮೇಲೆ ಕೊಡ್ತೀವಿ, ಅಲ್ಲಿ ತಂಕ ಅಂತ ಸ್ವಲ್ಪ್- ಸ್ವಲ್ಪ ಖರ್ಚಿಗೆ ಕೊಡುತ್ತಿದ್ದರು ಅಷ್ಟೇ." ಅಂದ ನಿಧಾನವಾಗಿ. "ಕೆಟ್ ಬಿಸ್ಲು, ನಮ್ಮಂತೋರಿಗೆ ಆಗೂದೆ ಅಲ್ಲ ಆ ದೇಶ. ನಾನು ಮಾವ ಕೊಟ್ ೩೦ ಸಾವ್ರ ದಲ್ಲಿ ಅಲ್ಲಿಗೆ ಹೋಗಿ ಸೇರ್ಕಂಡೆ, ಹೇಗೋ ಇಷ್ಟ್ ದಿನ ಅಲ್ಲಿದ್ದೆ ನೋಡು. ಆಗ್ಲೇ ಇಲ್ಲ, ಅಪ್ಪಂಗೆ ಹುಶಾರಿಲ್ಲ , ಸ್ವಲ್ಪ ದುಡ್ ಕೊಡಿ ಅಂತ ಹೊರಟು ಬಂದೆ. ನನ್ ಎಸ್ಸೆಲ್ಸಿ ಮಾರ್ಕ್ಸ್ ಕಾರ್ಡೂ ಅಲ್ಲೆ ಇದೆ ಭಾಸ್ಕರಾ, ಎಲ್ಲ ಹೋತು ಮಾರಾಯಾ" ಅಂತ ಹೇಳಿ ಅಳಲೇ ಶುರು ಮಾಡಿದ . ಭಾಸ್ಕರನಿಗೆ ಏನು ಮಾಡಬೇಕೆಂದೇ ತೋಚಲಿಲ್ಲ! "ಇರ್ಲಿ ರಹೀಮ ಆಗತ್ತೆ ಆಗತ್ತೆ ಸಮಾಧಾನ ಅಂತೆಲ್ಲ ಬೆ ಬ್ಬೆ ಬ್ಬೆ ಅಂತಂದ. ಅವನಿಗೆ ಯಾರಾದರೂ ಅತ್ತಾಗ ಸಮಾಧಾನ ಮಾಡುವ ಸಂದರ್ಭ ಜೀವನದಲ್ಲೇ ಬಂದಿರಲಿಲ್ಲ. ಇವನಿಂದೇನೂ ಈಗ ತನಗೆ ಸಿಗುವುದಿಲ್ಲ ಹಾಗಾದರೆ ಅನ್ನುವ ಅಸಮಾಧಾನ ಬೇರೆ ಜೊತೆಗೆ.

"ಈಗ ನಾನು ಮಾವನಿಗೆ ಬೇರೆ ಮೂವತ್ತು ಸಾವ್ರ ಕೊಡ್ಬೇಕು ಮಾರಯ್ನೆ , ಎಲ್ಲಿಗೆ ಹೋಗುದೋ ಏನೋ.. ಅಪ್ಪಂಗೆ ಫೋನ್ ಮಾಡಿ ಬರೂ ಸುದ್ದಿ ಹೇಳ್ದೆ, ಸುಮ್ನೆ "ಹಮ್" ಅಂದ್ರು, ಬ್ಯಾಡಾ ಬ್ಯಾಡ ಅಂದ್ರೂ ಹಠ ಮಾಡಿ ಹೋಗಿದ್ದೆ ನಾನು , ಹ್ಯಾಂಗೆ ಮುಖ ತೋರ್ಸದೋ ಏನೋ" "ಅಮ್ಮ ಏನ್ ಹೇಳ್ತಾಳೋ ಏನೋ.. ರಹೀಮನ "ಏನೋ"ಗಳ ಸರಣಿ ಮುಂದುವರಿಯುತ್ತಿತ್ತು..ಭಾಸ್ಕರ ಅಷ್ಟಕ್ಕೂ ತಲೆಯಾಡಿಸ ತೊಡಗಿದ. ಮತ್ತೇನೋ ಸಲಹೆ ಕೊಡುವುದಾಗಲೀ ಅಥವ ಪರಿಹಾರ ಸೂಚಿಸುವುದಾಗಲೀ ಅವನ ಪರಿಧಿಗೆ ಮೀರಿದ ವಿಷಯವಾಗಿತ್ತು. ಅಷ್ಟರಲ್ಲಿ ಅವನ ಮನೆ ಹತ್ತಿರ ಬಂತು . ರಹೀಮನನ್ನ ಕಂಡ ಚಿಳ್ಳೆ- ಪಿಳ್ಳೆಗಳು ಓಡಿ ಬಂದವು. ಭಾಸ್ಕರ ಅವನ ಬ್ಯಾಗನ್ನು ಅಲ್ಲೇ ಇಳಿಸಿ ," ಮತ್ತೆ ಯಾವಾಗರೂ ಸಿಗುವ ರಹೀಮ" ಅಂತಂದು ಪೇಟೆಯ ಕಡೆ ಕಾಲೆಳೆದುಕೊಂಡು ಹೊರಟ.

ಪೇಟೆಗೆ ಬರುತ್ತಿದ್ದಂತೆ ನಾಲ್ಕಾರು ಜನ ಅವನನ್ನ ಮುತ್ತಿಕೊಂಡರು. "ಏ ರಹೀಮ ಯಾಕೆ ಬಂದನೋ, ಏನಂತೆ? ಯಾಕಂತೆ", " ಓಡಿ ಬಂದ್ನಾ".. ಭಾಸ್ಕರ ಅದ್ಯಾವುದೂ ಕೇಳದವನಂತೆ ಕುಮಾರಣ್ಣ ಹೋಟೇಲಿಗೆ ಹೋದವನೇ, "ಒಂದು ಪ್ಲೇಟ್ ಇಡ್ಲಿ ಸಾಂಬಾರು" ಅಂತ ಹೇಳಿ ತನ್ನ ಹಣೆಬರವನ್ನು ಹಳಿದುಕೊಳ್ಳುತ್ತಾ ಕುಳಿತ.

ಒಂದೆರಡು ದಿನಗಳ ನಂತರ ಯಾರೋ ಮಾತಾಡಿಕೊಳ್ಳುತ್ತಿದ್ದರು, ರಹೀಮ ಈಗ ಮತ್ತೆ ಸೀತಾರಾಮ ಹೆಗಡೆಯವರ ಮನೆಗೆ ಕೆಲಸಕ್ಕೆ ಹೋಗುತ್ತಿದಾನಂತೆ ಅಂತ..

ನನ್ನೂರ ಕಥೆಗಳಿಗೊಂದು ಮುನ್ನುಡಿ

ತಮ್ಮ ಊರ ಮೇಲೆ ಒಂದು ಮಮಕಾರ ಎಲ್ಲರಿಗೂ ಇದ್ದೇ ಇರುತ್ತದೆ, ಅವರು ಎಲ್ಲೇ ಇರಲಿ. ನನಗೂ ಹಾಗೆಯೇ, ನನ್ನೂರ ಬಗ್ಗೆ ಏನೋ ಒಂದು ಬಂಧ. ನನ್ನೂರು ಯಾವುದು ಅಂತ ಕೇಳುತ್ತೀರೋ? ಹೇಳಲು ಬರುವುದಿಲ್ಲ ನನಗೆ. ನಾನು ಹುಟ್ಟಿ ಬೆಳೆದದ್ದು, ಮಂಗಳೂರಿನ ಸಮೀಪ. ಮೂಲವೋ, ಕೊಡಚಾದ್ರಿಯ ತಪ್ಪಲು , ಹೆಚ್ಚಾಗಿ ಓಡಾಟ ಮಾಡುವುದೋ, ಸಿರಸಿಯ ಕಡೆಗೆ. ಈ ಎಲ್ಲ ಪ್ರದೇಶಗಳ ಜನ- ಸಂಸ್ಕೃತಿ- ರೀತಿ, ನೀತಿ ಗಳು ನನ್ನನ್ನ ಬೆಳೆಸಿವೆ. ಈ ಊರುಗಳ ಸೆಳಕು ನನ್ನೊಳಗಿದೆ. ಪ್ರತಿ ಊರಿನ ಯಾವುದೋ ಅಂದು ಅಂಶ ನನ್ನನ್ನ ಬೆರಗುಗೊಳಿಸುತ್ತದೆ. ನಾನು ಬೆಳೆದ ಊರಿನ, ಓಡಾಡಿದ ಹಲವು ಹಳ್ಳಿಗಳ -ಮಾತಾಡಿಸಿದ ಜನರ, ನೋಡಿದ ಸ್ಥಳಗಳ ಎಲ್ಲ ಅಂಶಗಳೂ ಈ ನನ್ನೂರಿನಲ್ಲಿ ಬರುತ್ತದೆ!
ಯಾವ ಊರು ಕೂಡ ಬದಲಾಗುವುದಿಲ್ಲ, ಅದೇ ಜನ, ಅದೇ ಹಾದಿ, ಅದೇ ಅದೇ ಸಾಲು ಕೇರಿಗಳು, ಅದದೇ ಗಲಾಟೆ ಜಗಳಗಳು.. ಊರು ಬದಲಾಗುವುದಿಲ್ಲ, ಆದರೆ ಊರಿನ ಪ್ರಜ್ಞೆ ಮಾತ್ರ ನಿಧಾನವಾಗಿ ಬದಲಾಗುತ್ತದೆ, ಮಗ್ಗುಲಾಗುತ್ತದೆ, ಮತ್ತು ಕೆಲವೊಮ್ಮೆ, ಮಲಗಿಬಿಡುತ್ತದೆ.
ಕಥೆಗಳ ಸರಣಿ ಮುಂದೆ ಬರಲಿದೆ...